ತಿಥಿಗಳಲ್ಲಿ ಒಂದು. ಶುಕ್ಲಾಷ್ಟಮಿ, ಕೃಷ್ಣಾಷ್ಟಮಿ ಎಂದು ಎರಡು ವಿಧ. ಅಧಿಕಮಾಸ ಬರುವ ವರ್ಷಗಳಲ್ಲಿ ಎರಡು ಅಷ್ಟಮಿಗಳು ಅಧಿಕ.

ಚೈತ್ರಮಾಸದ ಶುಕ್ಲಾಷ್ಟಮಿಯ ದಿವಸ ಎಂಟು ಅಶೋಕ ಚಿಗುರುಗಳಿಂದ ಕೂಡಿದ ನೀರಿನ ಪಾನ, ಬ್ರಹ್ಮಪುತ್ರಾ ನದಿಯಸ್ನಾನ ಮತ್ತು ಭವಾನಿಯ ದರ್ಶನ ಇವು ಪುಣ್ಯ ಫಲಪ್ರದಗಳು.

ಶ್ರಾವಣಮಾಸದ ಕೃಷ್ಣಾಷ್ಟಮಿಯೇ ಜನ್ಮಾಷ್ಟಮಿ. ಇದು ಕೇವಲಾಷ್ಟಮಿ, ಜಯಂತಿ ಎಂದು ಎರಡು ವಿಧ. ಶ್ರೀಕೃಷ್ಣನ ಜನ್ಮತಿಥಿಯಾದ ಅಷ್ಟಮಿ, ಜನನ ನಕ್ಷತ್ರವಾದ ರೋಹಿಣಿ ಇವು ಒಂದೇ ದಿವಸದಲ್ಲಾಗಲಿ, ಬೇರೆ ಬೇರೆ ದಿವಸದಲ್ಲಾಗಲಿ ಬರಬಹುದು. ಶುದ್ಧವಾದ ಅಷ್ಟಮೀ ತಿಥಿ, ರೋಹಿಣೀ ನಕ್ಷತ್ರ ಈ ಎರಡೂ ಅರ್ಧರಾತ್ರಿಯ ಕಾಲದಲ್ಲಿರುವುದು ಈ ವ್ರತದಲ್ಲಿ ಮುಖ್ಯವಾಗಿ ಗ್ರಾಹ್ಯ. ಈ ದಿವಸ ಉಪವಾಸವಿದ್ದು, ರಾತ್ರಿ ಪರಿವಾರದೊಡನೆ ಶ್ರೀಕೃಷ್ಣನನ್ನು ಪುಜಿಸಿ ಶಂಖತೀರ್ಥದಿಂದ ಮೊದಲು ಕೃಷ್ಣನಿಗೂ ಬಳಿಕ ರೋಹಿಣೀಸಹಿತ ನಾದ ಚಂದ್ರನಿಗೂ ಪ್ರತ್ಯೇಕವಾಗಿ ಮೂರು ಮೂರು ಸಲ ಅರ್ಘ್ಯಕೊಡಬೇಕು. ವ್ರತಾಂತ್ಯದಲ್ಲಿ ಪಾರಣೆ ವಿಹಿತವಾಗಿದೆ. ಇಂದಿಗೂ ಈ ವ್ರತವನ್ನು ಭಾರತದ ಎಲ್ಲೆಡೆಗಳಲ್ಲೂ ಆಚರಿಸುತ್ತಾರೆ.

ಭಾದ್ರಪದ ಶುಕ್ಲಾಷ್ಟಮಿ ದೂರ್ವಾಷ್ಟಮಿ, ಇದೇ ತಿಂಗಳಿನ ಕೃಷ್ಣಾಷ್ಟಮಿ ಮಧ್ಯಾಷ್ಟಮಿ, ಆಶ್ವಯುಜ ಶುಕ್ಲಾಷ್ಟಮಿ ದುರ್ಗಾಷ್ಟಮಿ, ಮಾರ್ಗಶಿರ ಕೃಷ್ಣಾಷ್ಟಮಿ ಭೈರವಾಷ್ಟಮಿ, ಮಾಘಶುಕ್ಲಾಷ್ಟಮಿ ಭೀಷ್ಮಾಷ್ಟಮಿ. ಮಾರ್ಗಶಿರ ಮಾಸದಿಂದ ನಾಲ್ಕು ತಿಂಗಳಿನ ಕೃಷ್ಣಾಷ್ಟಮಿ ಗಳು ಅಷ್ಟಕಗಳು. ದೂರ್ವಾಷ್ಟಮಿಯ ದಿವಸ ದೂರ್ವೆಯಿಂದ ಶಂಕರನ ಪುಜೆ, ದುರ್ಗಾಷ್ಟಮಿಯ ದಿವಸ ದುರ್ಗಿಯ ಪುಜೆ, ಭೀಷ್ಮಾಷ್ಟಮಿಯ ದಿವಸ ಭೀಷ್ಮನನ್ನುದ್ದೇಶಿಸಿ ತರ್ಪಣ, ಮಧ್ಯಾಷ್ಟಮಿ ಮತ್ತು ಅಷ್ಟಕಗಳಲ್ಲಿ ಪಿತೃಗಳನ್ನುದ್ದೇಶಿಸಿ ಶ್ರಾದ್ಧಮಾಡುವುದು-ಇವು ಅಂದಂದಿನ ವಿಶೇಷ ಕಾರ್ಯಗಳು.

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ